OpenAI ನಲ್ಲಿ ಸಮಸ್ಯೆ ತನಿಖೆಯ ಸಮಯವನ್ನು ಗಂಟೆಗಳಿಂದ ನಿಮಿಷಗಳಿಗೆ ಇಳಿಸಿದ Ultrafast
OpenAI ತನ್ನದೇ ತಂತ್ರಜ್ಞಾನ ಮತ್ತು ಎಪಿಐಗಳನ್ನು ಹೇಗೆ ಬಳಸುತ್ತಿದೆ ಎಂಬ ಆಂತರಿಕ ಉದಾಹರಣೆಗಳನ್ನು ಹಂಚಿಕೊಳ್ಳುವ ನಮ್ಮ ಸರಣಿಯ ಭಾಗವಿದು. ಈ ಸಾಧನಗಳನ್ನು OpenAI ನಲ್ಲಿ ಆಂತರಿಕವಾಗಿ ಬಳಸಲಾಗುತ್ತಿದೆ. ಅತ್ಯಾಧುನಿಕ AI ನಮ್ಮ ವಿವಿಧ ತಂಡಗಳ ಕೆಲಸಗಳಿಗೆ ಹೇಗೆ ನೆರವಾಗುತ್ತಿದೆ ಎಂಬುದನ್ನು ತೋರಿಸಲು ಈ ಉದಾಹರಣೆಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
Ultrafast ಎಂಬುದು Codexನಲ್ಲಿರುವ ಅತಿವೇಗದ ಕಾರ್ಯವಿಧಾನ. OpenAI ಎಂಜಿನಿಯರ್ಗಳು ತಾಂತ್ರಿಕ ಸಮಸ್ಯೆಗಳಿಗೆ ಸ್ಪಂದಿಸಲು ಈಗ ಸಾಮಾನ್ಯವಾಗಿ ಇದನ್ನೇ ಬಳಸುತ್ತಾರೆ. ಏನಾದರೂ ಕೆಟ್ಟು, ಸಮಸ್ಯೆ ಉಲ್ಬಣಿಸುತ್ತಿರುವಾಗ ಉತ್ತರಕ್ಕಾಗಿ ನಿಮಿಷಗಟ್ಟಲೆ ಕಾಯಲು ಎಂಜಿನಿಯರ್ಗಳಿಗೆ ಸಾಮಾನ್ಯವಾಗಿ ಸಮಯವಿರುವುದಿಲ್ಲ. Ultrafast ಮೂಲಕ ಅವರು ಒಂದೇ ಸಮಯದಲ್ಲಿ ಹಲವು ಸಂಭವನೀಯ ಕಾರಣಗಳನ್ನು ತನಿಖೆ ಮಾಡಬಹುದು. ತಮ್ಮ ಗಮನವನ್ನು ಬೇರೆಡೆ ಹರಿಸದೆ ಉತ್ತರ ಪಡೆಯಬಹುದು.
OpenAI ತಾಂತ್ರಿಕ ಸಿಬ್ಬಂದಿ ಸದಸ್ಯರಾದ ಆರನ್ ಫ್ರೀಲ್ ಸಾಮಾನ್ಯವಾಗಿ ತಾಂತ್ರಿಕ ಸಮಸ್ಯೆಯ ನಿರ್ವಹಣೆಯ ನೇತೃತ್ವ ವಹಿಸುತ್ತಾರೆ. ಸಮಸ್ಯೆಯ ನಿರ್ವಹಣೆಗಾಗಿ ಅವರು Slack ಚಾನೆಲ್ ತೆರೆದು, ಆ ಸಮಸ್ಯೆಯತ್ತ Codex ನ ಗಮನ ಸೆಳೆಯುತ್ತಾರೆ. ಸಮಸ್ಯೆಯನ್ನು ಗಮನಿಸುತ್ತಿರಲು, ತನಿಖೆ ಮಾಡಲು ಮತ್ತು ಪ್ರಶ್ನೆಗಳು ಬಂದಂತೆ ಉತ್ತರಿಸಲು Codex ಗೆ ಸೂಚಿಸುತ್ತಾರೆ. “ಯಾವುದೇ ಸಮಸ್ಯೆಯಲ್ಲಿ, ಹಲವಾರು ಹಂತಗಳಲ್ಲಿ ಏನಾದರೂ ತಪ್ಪಾಗಿರಬಹುದು. ಸರಿಯಾದ ಹುಲ್ಲಿನ ಬಣವೆಯಲ್ಲಿ ಸರಿಯಾದ ಸೂಜಿಯನ್ನು ಹುಡುಕುವುದೇ ಆ ಚಾನೆಲ್ನಲ್ಲಿರುವವರ ಮುಖ್ಯ ಕೆಲಸ. Ultrafast ಬಳಸಿ ನಾನು ಆ ಎಲ್ಲ ಬಣವೆಗಳಲ್ಲೂ ಏಕಕಾಲಕ್ಕೆ ಹುಡುಕಬಹುದು. ಹೀಗಾಗಿ ಸಮಸ್ಯೆಗಳಿಗೆ ಹೆಚ್ಚು ವೇಗವಾಗಿ ಸ್ಪಂದಿಸಬಹುದು” ಎಂದು ಅವರು ಹೇಳುತ್ತಾರೆ.
ತಾಂತ್ರಿಕ ಸಿಬ್ಬಂದಿ ಸದಸ್ಯ ಹಾಗೂ ದತ್ತಾಂಶ ಕೇಂದ್ರದ ಭದ್ರತಾ ವಿನ್ಯಾಸಕಾರರಾದ ಎಜೆ ಟ್ರೊಬೋಜೆವಿಕ್ ಹೇಳುವ ಪ್ರಕಾರ, ಹಿಂದೆ ಭದ್ರತಾ ಸಮಸ್ಯೆಗಳ ತನಿಖೆಯಲ್ಲಿ ರಚನಾತ್ಮಕ ಮತ್ತು ಅಸಂರಚಿತ ದತ್ತಾಂಶವನ್ನು ಒಟ್ಟುಗೂಡಿಸಿ, ಏಕರೂಪಕ್ಕೆ ತಂದು, ನಿರ್ಧಾರಕ್ಕೆ ಬೇಕಾದ ಹಿನ್ನೆಲೆ ಒದಗಿಸಲು ಒಂದೆರಡು ಗಂಟೆ ಬೇಕಾಗುತ್ತಿತ್ತು. “ಈಗ ಅದು 10ರಿಂದ 15 ನಿಮಿಷಗಳಲ್ಲಿ ಆಗುತ್ತದೆ. ಕೆಲವೊಮ್ಮೆ ಬಹುತೇಕ ತತ್ಕ್ಷಣವೇ ಆಗುತ್ತದೆ” ಎಂದು ಅವರು ಹೇಳುತ್ತಾರೆ.
ಆ್ಯಡಮ್ ಪೆರಿ ಮತ್ತು ಸಾಯನ್ ಸಿಸೋದಿಯಾ ಇಬ್ಬರೂ ಮೂಲ ಏಜೆಂಟ್ ತಂಡದಲ್ಲಿ ಕೆಲಸ ಮಾಡುತ್ತಾರೆ. Codex ಕ್ರಮಗಳನ್ನು ಕೈಗೊಳ್ಳಲು, ಆಜ್ಞೆಗಳನ್ನು ಚಲಾಯಿಸಲು ಮತ್ತು ಸಾಧನಗಳನ್ನು ಬಳಸಲು ಅನುವು ಮಾಡಿಕೊಡುವ ಸಂಕೇತವನ್ನು ಅವರು ಅಭಿವೃದ್ಧಿಪಡಿಸುತ್ತಾರೆ. ಭದ್ರತಾ ಘಟನೆಗಳ ಸಂದರ್ಭದಲ್ಲಿ ಅವರು ಕಾರ್ಯನಿರ್ವಹಿಸುವ ರೀತಿಯನ್ನು Ultrafast ಬದಲಿಸಿದೆ. “ಹಿಂದೆ, ಯಾವುದನ್ನಾದರೂ ಪರಿಶೀಲಿಸಲು Codex ಗೆ ಹೇಳಿ, ಅದೇ ಸಮಯದಲ್ಲಿ ನಾನೂ ಅದನ್ನು ಪರಿಶೀಲಿಸುತ್ತಿದ್ದೆ. ಅದರ ಉತ್ತರಕ್ಕಾಗಿಯೇ ಕಾಯುವಷ್ಟು ವೇಗವಾಗಿ ಅದು ಕೆಲಸ ಮಾಡುವುದಿಲ್ಲ ಎಂದು ನನಗೆ ತಿಳಿದಿತ್ತು. ಈಗ Ultrafast ನಿಂದಾಗಿ Codex ಸಾಕಷ್ಟು ವೇಗವಾಗಿದೆ. ಹೀಗಾಗಿ ನನ್ನ ಗಮನವನ್ನು ಬೇರೆಡೆ ಹರಿಸದೆ ಒಂದೇ ಕೆಲಸದ ಮೇಲೆ ಕೇಂದ್ರೀಕರಿಸಬಹುದು” ಎನ್ನುತ್ತಾರೆ ಆ್ಯಡಮ್.
ಹಲವು ದತ್ತಾಂಶ ಮೂಲಗಳಿಂದ ತತ್ಕ್ಷಣ ಉತ್ತರ ಪಡೆಯಲು Ultrafast ನೆರವಾಗುವುದು ಸಾಯನ್ಗೆ ಇಷ್ಟವಾಗಿದೆ. “ಸಮಸ್ಯೆ ಎದುರಾದಾಗ ಚಟುವಟಿಕೆ ದಾಖಲೆಗಳನ್ನು ಹುಡುಕುವುದಷ್ಟೇ ಅಲ್ಲ, ಅನುಮಾನಾಸ್ಪದ ಬದಲಾವಣೆಗಳ ಉಲ್ಲೇಖಗಳಿವೆಯೇ ಅಥವಾ Slack ನ ಬೇರೆಡೆ ಜನರು ಇದೇ ರೀತಿಯ ಲಕ್ಷಣಗಳ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು ತಿಳಿಯಲು Slack ನಲ್ಲೂ ಹುಡುಕಲು Codex ಬಳಸುತ್ತೇನೆ” ಎನ್ನುತ್ತಾರೆ ಅವರು.
AI ಮೂಲಕ ಉತ್ತರ ಪಡೆಯಲು 30 ಸೆಕೆಂಡುಗಳಿಗಿಂತ ಹೆಚ್ಚು ಸಮಯ ಬೇಕಾದರೆ, ತಾವು Slack ನೋಡುತ್ತಾರೆ ಅಥವಾ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಾರೆ ಎಂದು ಮತ್ತೊಬ್ಬ ತಾಂತ್ರಿಕ ಸಿಬ್ಬಂದಿ ಸದಸ್ಯರಾದ ಜೆಫ್ ನಿಯು ಹೇಳುತ್ತಾರೆ. ಆದರೆ Ultrafast ಮೂಲಕ ಈಗ ಅವರ ಬಹುತೇಕ ಕೆಲಸಗಳು ಅಷ್ಟರೊಳಗೇ ಮುಗಿಯುತ್ತವೆ. ಹಿಂದೆ ಅವರು Codex ಗೆ ಪ್ರಶ್ನೆ ಕೇಳಿ, ಅದು ಯೋಚಿಸುವಾಗ ಬೇರೆ ಕೆಲಸಕ್ಕೆ ಹೋಗುತ್ತಿದ್ದರು. ಮರಳಿ ಬರುವಷ್ಟರಲ್ಲಿ ತಮ್ಮ ಆಲೋಚನೆಯ ಕೊಂಡಿ ಕಳೆದುಕೊಂಡಿರುತ್ತಿದ್ದರು. ಈಗ ಆ ಸಂಭಾಷಣೆ ಯಾವುದೇ ವಿಳಂಬವಿಲ್ಲದೆ ನಡೆಯುತ್ತದೆ. ಇದರಿಂದ ಅವರು ಕೈಯಲ್ಲಿರುವ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.
ಈಗಿರುವ ಸಂಕೇತವನ್ನು ಮರುರೂಪಿಸಲು ಕಡಿಮೆ ಸಮಯ ಬೇಕಾಗುವುದರಿಂದ, ದೊಡ್ಡ ಪ್ರಮಾಣದಲ್ಲಿ ಸಂಕೇತ ಮರುರಚನೆ ಕೈಗೊಳ್ಳಲು ಜೆಫ್ ಈಗ ಹೆಚ್ಚು ಸಿದ್ಧರಿದ್ದಾರೆ. ಇದಕ್ಕೂ Ultrafast ಕಾರಣ. “ಸಂಕೇತದಲ್ಲಿ ಬಾಕಿ ಉಳಿದ ತಾಂತ್ರಿಕ ಸುಧಾರಣೆಗಳನ್ನು ಮಾಡುವುದು ಹಿಂದೆಂದಿಗಿಂತಲೂ ಈಗ ಸುಲಭವಾಗಿದೆ. ಸಂಕೇತ ಬರೆಯುವುದು ಅಗ್ಗವಾಗಿದೆ. ಈಗ ಅದನ್ನು ಬಹಳ ಬೇಗ ಸೃಷ್ಟಿಸಲೂ ಸಾಧ್ಯ. ಹಿಂದೆ ಬಹಳ ವೆಚ್ಚವಾಗುತ್ತಿದ್ದ ಮರುರಚನೆ ಈಗ ಬಹುತೇಕ ಕ್ಷಣಮಾತ್ರದಲ್ಲಿ ಆಗುತ್ತದೆ” ಎನ್ನುತ್ತಾರೆ ಅವರು.
ಆ್ಯಡಮ್ ನಿರಂತರವಾಗಿ ಬಳಸುವ ಒಂದು Codex ಸಂಭಾಷಣೆ ಇದೆ. ಅದನ್ನು ಅವರು ತಮ್ಮ ಮುಖ್ಯ ಕಾರ್ಯಸಹಾಯಕ ಎಂದು ಕರೆಯುತ್ತಾರೆ. ಪ್ರತಿದಿನ ಬೆಳಗ್ಗೆ ಅವರಿಗೆ ಯಾವ ಸಭೆಗಳಿವೆ ಮತ್ತು ಯಾವ ಸಂದೇಶಗಳಿಗೆ ಉತ್ತರಿಸಲು ಅವರು ಮರೆತಿರಬಹುದು ಎಂಬುದನ್ನು ಅದು ತಿಳಿಸುತ್ತದೆ. “ಆ ಸಾರಾಂಶ ಬರೆಯಲು ಅದು ಈಗಾಗಲೇ ಎಲ್ಲ ದತ್ತಾಂಶವನ್ನೂ ನೋಡಿರುತ್ತದೆ. ಹಾಗಾಗಿ ನಾನು ಮರುಪ್ರಶ್ನೆ ಕೇಳಿದಾಗ, ಇನ್ನಷ್ಟು ದತ್ತಾಂಶ ತರಲು ಕಾಯಬೇಕಾಗುವುದಿಲ್ಲ. ನಿಜವಾದ ಮುಖ್ಯ ಕಾರ್ಯಸಹಾಯಕನೊಂದಿಗೆ ಮಾತನಾಡುವಂತೆಯೇ, ಅದೇ ಸಂಭಾಷಣೆಯಲ್ಲಿ ನಾನು ಪ್ರಶ್ನೆಗಳನ್ನು ಕೇಳುತ್ತಾ ಹೋಗಬಹುದು” ಎನ್ನುತ್ತಾರೆ ಅವರು.
ಅರ್ಜಿಗಳನ್ನು ತುಂಬುವಂತಹ, ಬ್ರೌಸರ್ನಲ್ಲಿ ಕೈಯಾರೆ ಮಾಡಬೇಕಾದ ಬೇಸರದ ಕೆಲಸಗಳಿಗೆ ಸಾಯನ್ Codex ಬಳಸುತ್ತಾರೆ. ಹಿಂದೆ ಇದು ತುಂಬಾ ನಿಧಾನವಾಗಿದ್ದರಿಂದ ಅವರು ಅದನ್ನು ಬಳಸುತ್ತಿರಲಿಲ್ಲ. “ಅದು ಬ್ರೌಸರ್ ತೆರೆದು, ಐದು ಸೆಕೆಂಡು ಯೋಚಿಸುತ್ತಾ ಕೂರುತ್ತಿತ್ತು. ಏನನ್ನಾದರೂ ಕ್ಲಿಕ್ ಮಾಡಿ, ಮತ್ತೆ ಸುಮ್ಮನೆ ಕೂರುತ್ತಿತ್ತು,” ಎನ್ನುತ್ತಾರೆ ಅವರು. ಇತ್ತೀಚಿನ ಮಾದರಿಗಳ ಗಣಕ ಬಳಕೆಯ ಸಾಮರ್ಥ್ಯ ಸುಧಾರಿಸಿರುವುದರಿಂದ, ಆ ಕೆಲಸವನ್ನು Codex ಗೆ ವಹಿಸಲು ಅವರಿಗೀಗ ಹೆಚ್ಚು ವಿಶ್ವಾಸವಿದೆ. “ಈಗ ಬ್ರೌಸರ್ನಲ್ಲಿ ಕ್ಲಿಕ್ ಮಾಡುತ್ತಾ ಕೆಲಸ ಮಾಡಲು ಅದನ್ನು ಬಿಡುವುದಕ್ಕೆ ನನಗೆ ಯಾವ ಹಿಂಜರಿಕೆಯೂ ಇಲ್ಲ. ಅದು ಸಾಕಷ್ಟು ವೇಗವಾಗಿದೆ. ನಾನೇ ಆ ಕೆಲಸ ಮಾಡುತ್ತಿಲ್ಲವೆಂದ ಮಾತ್ರಕ್ಕೆ ನನ್ನ ಸಮಯ ವ್ಯರ್ಥವಾಗುತ್ತಿಲ್ಲ.”
ತಾಂತ್ರಿಕ ಸಮಸ್ಯೆಗಳ ನಿರ್ವಹಣೆ, ದಿನದ ಯೋಜನೆ ಮತ್ತು ಸಂಕೇತ ಮರುರಚನೆ—ಈ ಎಲ್ಲ ಕೆಲಸಗಳಲ್ಲಿ OpenAI ತಾಂತ್ರಿಕ ಸಿಬ್ಬಂದಿ ಪ್ರಶ್ನೆ ಕೇಳುವ ವೇಗದಲ್ಲೇ Codex ಜೊತೆ ಕೆಲಸ ಮಾಡಲು Ultrafast ಅನುವು ಮಾಡಿಕೊಡುತ್ತದೆ. ಅವರು ಉತ್ತರದ ಬಗ್ಗೆ ಮರುಪ್ರಶ್ನೆ ಕೇಳಬಹುದು, ಇನ್ನೊಂದು ವಿಧಾನ ಪ್ರಯತ್ನಿಸಬಹುದು ಮತ್ತು ತಮ್ಮ ಆಲೋಚನೆಯ ಕೊಂಡಿ ಕಳಚದಂತೆ ಕೆಲಸ ಮುಂದುವರಿಸಬಹುದು. ಕಾಯುವ ಸಮಯ ಕಡಿಮೆಯಾದಂತೆ, ಅವರು ಕೈಗೊಳ್ಳಲು ಸಿದ್ಧರಿರುವ ಕೆಲಸಗಳೂ ಬದಲಾಗುತ್ತವೆ. ಮುಂದೂಡಿದ್ದ ಸಂಕೇತ ಮರುರಚನೆಯಿಂದ ಹಿಡಿದು, ಈಗ ಬೇರೆಯವರಿಗೆ ವಹಿಸುವುದು ಪ್ರಯೋಜನಕಾರಿ ಎನಿಸುವ ದಿನನಿತ್ಯದ ಕೆಲಸದವರೆಗೆ ಇದರಲ್ಲಿ ಸೇರಿವೆ.
- ಕೋಡೆಕ್ಸ್
- 2026


