OpenAI

ನವೆಂಬರ್ 2, 2026

ಭದ್ರತೆ

ಭದ್ರತಾ ದೋಷ ಪತ್ತೆಗೆ ಹೆಚ್ಚಿನ ಬಹುಮಾನ ನೀಡಿ ರಕ್ಷಕರನ್ನು ಗೌರವಿಸುತ್ತಿದ್ದೇವೆ

ನಮ್ಮ ಪರೀಕ್ಷೆಗಳಲ್ಲಿ ಪತ್ತೆಯಾಗದೆ ಉಳಿದಿರಬಹುದಾದ OpenAI ತಂತ್ರಾಂಶದ ಭದ್ರತಾ ದೋಷಗಳನ್ನು ಹುಡುಕಲು ಸ್ವತಂತ್ರ ಸಂಶೋಧಕರನ್ನು ಮತ್ತಷ್ಟು ಪ್ರೋತ್ಸಾಹಿಸಲು, OpenAI ಭದ್ರತಾ ದೋಷ ಪತ್ತೆ ಕಾರ್ಯಕ್ರಮದ ಬಹುಮಾನಗಳನ್ನು ಹೆಚ್ಚಿಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಭದ್ರತಾ ದೋಷ ವರದಿಗಳಿಗೆ ಸಂಶೋಧಕರು ಹೆಚ್ಚಿನ ಬಹುಮಾನ ಪಡೆಯಲು ಹೊಸ ಪ್ರೋತ್ಸಾಹಧನಗಳನ್ನೂ ಪರಿಚಯಿಸುತ್ತಿದ್ದೇವೆ.

ಉದ್ಯಮದಾದ್ಯಂತ ತಂತ್ರಜ್ಞಾನವನ್ನು ರಕ್ಷಿಸುವಲ್ಲಿ ಸ್ವತಂತ್ರ ಭದ್ರತಾ ಸಂಶೋಧಕರು ಅತ್ಯಗತ್ಯ ಪಾತ್ರ ವಹಿಸುತ್ತಾರೆ. OpenAI ಯಲ್ಲಿ, ದೋಷಗಳನ್ನು ಜವಾಬ್ದಾರಿಯುತವಾಗಿ ಬಹಿರಂಗಪಡಿಸಲು ಪ್ರೋತ್ಸಾಹಿಸುವುದು ನಮ್ಮ ಭದ್ರತಾ ವಿಧಾನದ ಪ್ರಮುಖ ಭಾಗವಾಗಿದೆ. ಇದು ನಮ್ಮ ಡಿಫೆನ್ಸ್ ಫ್ಯಾಕ್ಟರಿ⁠ ಕೆಲಸಕ್ಕೆ ಪೂರಕವಾಗಿದೆ. ಅಲ್ಲಿ ನಮ್ಮ ಎಂಜಿನಿಯರ್‌ಗಳು ದೌರ್ಬಲ್ಯಗಳನ್ನು ಪತ್ತೆಹಚ್ಚಲು, ಅವನ್ನು ಮರುಸೃಷ್ಟಿಸಲು ಮತ್ತು ಪರಿಹಾರಗಳನ್ನು ಪರೀಕ್ಷಿಸಲು ನಮ್ಮ ಮಾಡೆಲ್‌ಗಳನ್ನು ಬಳಸುತ್ತಾರೆ.

ಸಂಶೋಧಕರನ್ನು ಪ್ರೋತ್ಸಾಹಿಸಿ ಸಬಲಗೊಳಿಸಲು ಮತ್ತು ಸಮುದಾಯಕ್ಕೆ ಆದ್ಯತೆ ನೀಡುವ ಸಹಯೋಗದ ಭದ್ರತಾ ವಾತಾವರಣವನ್ನು ಮತ್ತಷ್ಟು ಬೆಳೆಸಲು ಇಂದಿನ ಬದಲಾವಣೆಗಳನ್ನು ರೂಪಿಸಲಾಗಿದೆ.

ಗಂಭೀರ ಭದ್ರತಾ ದೋಷಗಳಿಗೆ ದೊಡ್ಡ ಬಹುಮಾನಗಳು

ಮಧ್ಯಮ, ಹೆಚ್ಚಿನ ಮತ್ತು ಅತಿಗಂಭೀರ ಅಪಾಯದ ದೋಷಗಳಿಗೆ ನೀಡುವ ಬಹುಮಾನದ ಮೊತ್ತದ ಶ್ರೇಣಿಗಳ ಮಧ್ಯಬಿಂದುವನ್ನು ಸರಾಸರಿ ನಾಲ್ಕು ಪಟ್ಟಿಗಿಂತ ಹೆಚ್ಚು ಏರಿಸುತ್ತಿದ್ದೇವೆ. ChatGPT, Codex ಅಥವಾ API ಪ್ಲ್ಯಾಟ್‌ಫಾರ್ಮ್‌ನಂತಹ ಪ್ರಮುಖ ಉತ್ಪನ್ನದಲ್ಲಿ ಅತಿಗಂಭೀರ ಭದ್ರತಾ ದೋಷ ಪತ್ತೆಹಚ್ಚಿದರೆ ಈಗ $30,000 ವರೆಗೆ ಬಹುಮಾನ ಸಿಗಲಿದೆ. ಈ ಉತ್ಪನ್ನಗಳಲ್ಲಿ ಪತ್ತೆಯಾಗುವ ಅಸಾಧಾರಣ ಮಟ್ಟದ ಅತಿಗಂಭೀರ ದೋಷಗಳು ಹಿಂದಿನಂತೆಯೇ $100,000 ವರೆಗಿನ ಬಹುಮಾನಕ್ಕೆ ಅರ್ಹವಾಗಿರುತ್ತವೆ. ಈಗ ಬೋನಸ್‌ಗಳೊಂದಿಗೆ $172,000 ವರೆಗೆ ಪಡೆಯಬಹುದು. ಸಂಪೂರ್ಣ ವಿವರಗಳು ನಮ್ಮ ಭದ್ರತಾ ದೋಷ ಪತ್ತೆ ಬಹುಮಾನ ಕಾರ್ಯಕ್ರಮದಲ್ಲಿ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಲಭ್ಯವಿವೆ.

ಉತ್ತಮ ಗುಣಮಟ್ಟದ ವರದಿಗಳಿಗೆ ಬೋನಸ್ ಗುಣಕಗಳು

ಉತ್ತಮ ಗುಣಮಟ್ಟದ ವರದಿಗಳು ಮೂಲ ಬಹುಮಾನದ ಮೇಲೆ ಬೋನಸ್ ಗುಣಕ ಪಡೆಯಲು ಅರ್ಹವಾಗಿರುತ್ತವೆ. ದೋಷವನ್ನು ಪ್ರತ್ಯೇಕವಾಗಿ ಗುರುತಿಸಿ, ಅದನ್ನು ಯಾವಾಗ ದುರ್ಬಳಕೆ ಮಾಡಿಕೊಳ್ಳಬಹುದು ಮತ್ತು ಅದರ ಪರಿಣಾಮವೇನು ಎಂಬುದನ್ನು ತೋರಿಸುವ ವಿಶ್ವಾಸಾರ್ಹ ಪ್ರಾಯೋಗಿಕ ನಿರೂಪಣೆ ಇದ್ದರೆ, ಪರಿಹಾರ ಕಂಡುಕೊಳ್ಳುವ ಕೆಲಸವನ್ನು ನಾವು ಬೇಗನೆ ಆರಂಭಿಸಬಹುದು. ಪತ್ತೆಯಾದ ದೋಷದ ಮಾಹಿತಿಯನ್ನು ವಿಶೇಷವಾಗಿ ಉಪಯುಕ್ತವಾಗಿಸುವ ಹೆಚ್ಚುವರಿ ಶ್ರಮವನ್ನು ಗುಣಮಟ್ಟದ ಗುಣಕವು ಗುರುತಿಸುತ್ತದೆ.

ನಿಷ್ಠಾ ಕಾರ್ಯಕ್ರಮದ ಬೋನಸ್‌ಗಳು

ದೀರ್ಘಕಾಲೀನ ಸಂಬಂಧಗಳನ್ನು ಬೆಳೆಸಲು ಮತ್ತು ನಮ್ಮ ಭದ್ರತಾ ಸಮುದಾಯವನ್ನು ನಿರಂತರವಾಗಿ ಸಬಲಗೊಳಿಸಲು, ಹಂತವಾರು ನಿಷ್ಠಾ ಬೋನಸ್ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದೇವೆ. ಎಲ್ಲರಿಗೂ AI ತಂತ್ರಜ್ಞಾನವನ್ನು ಹೆಚ್ಚು ಸುರಕ್ಷಿತವಾಗಿಸಲು ನಮ್ಮೊಂದಿಗೆ ನಿರಂತರವಾಗಿ ಕೈಜೋಡಿಸುವ ಸಂಶೋಧಕರನ್ನು ಗುರುತಿಸಿ, ಬೆಂಬಲಿಸಿ, ಗೌರವಿಸಲು ಈ 5-ಹಂತದ ವ್ಯವಸ್ಥೆಯು ಹಂತಹಂತವಾಗಿ ಹೆಚ್ಚುವ ಬೋನಸ್‌ಗಳನ್ನು ನೀಡುತ್ತದೆ.

ಆದ್ಯತಾ ಅಭಿಯಾನದ ಗುಣಕಗಳು

ತಂತ್ರಜ್ಞಾನ ವಿಕಸನಗೊಂಡಂತೆ ಸಮುದಾಯದ ಭಾಗವಹಿಸುವಿಕೆಯನ್ನು ಬೆಂಬಲಿಸಲು, ಆದ್ಯತಾ ಅಭಿಯಾನಗಳಲ್ಲಿ ಹೊಸದಾಗಿ ಬಿಡುಗಡೆಯಾದ ವೈಶಿಷ್ಟ್ಯಗಳಿಗಾಗಿ ಪ್ರತ್ಯೇಕ ಬೋನಸ್ ನಿಧಿಗಳನ್ನು ಮೀಸಲಿಡಲಾಗುತ್ತದೆ. ಈ ಅಲ್ಪಾವಧಿಯ ಅಭಿಯಾನಗಳು ಹೊಸ ಬೆಳವಣಿಗೆಗಳನ್ನು ಆರಂಭದಲ್ಲೇ ಪರೀಕ್ಷಿಸಲು ಸಂಶೋಧಕರಿಗೆ ಹೆಚ್ಚಿನ ಬಹುಮಾನದ ಅವಕಾಶಗಳನ್ನು ನೀಡುತ್ತವೆ ಮತ್ತು ಅವರ ಆರಂಭಿಕ ಕೊಡುಗೆಗಳಿಗೆ ಮನ್ನಣೆ ಒದಗಿಸುತ್ತವೆ.

ಪರಿಷ್ಕೃತ ಬಹುಮಾನ ಮೊತ್ತದ ಲೆಕ್ಕಾಚಾರದ ಉದಾಹರಣೆಗಳು

ಭದ್ರತಾ ದೋಷದ ಉದಾಹರಣೆ

ಹಿಂದಿನ ಬಹುಮಾನದ ಉದಾಹರಣೆ

ಹೊಸ ಬಹುಮಾನ ಲೆಕ್ಕಾಚಾರದ ಉದಾಹರಣೆ

ಹೊಸ ಬಹುಮಾನ

ಮಧ್ಯಮ ಅಪಾಯ - ChatGPT (ಪ್ರಮುಖ ಸ್ವತ್ತು): ಓದಲು ಮಾತ್ರ ಅನುಮತಿ ಇರುವ ಸದಸ್ಯರು ಬರೆಯುವ ಅನುಮತಿ ಇಲ್ಲದೆಯೇ ಯೋಜನೆಗೆ ಕಡತಗಳನ್ನು ಅಪ್‌ಲೋಡ್ ಮಾಡಬಹುದು.

$750

$2,000 × 1.15 ಗುಣಮಟ್ಟದ ಬೋನಸ್ × 1.05 ಕಂಚಿನ ಹಂತದ ನಿಷ್ಠಾ ಬೋನಸ್

$2,415

ಹೆಚ್ಚಿನ ಅಪಾಯ - Prism (ಪ್ರಮುಖವಲ್ಲದ ಸ್ವತ್ತು): ಬಳಕೆದಾರರ ಯೋಜನೆಗೆ ಅಪ್‌ಲೋಡ್ ಮಾಡಿದ ಕಡತವನ್ನು ಓದಲು ಸಾಧ್ಯವಾಗಿಸುವ IDOR ದೋಷ

$1,000

$2,500 × 1.15 ಗುಣಮಟ್ಟದ ಬೋನಸ್ × 1.10 ಚಿನ್ನದ ಹಂತದ ನಿಷ್ಠಾ ಬೋನಸ್

$3,162.50

ಅತಿಗಂಭೀರ ಅಪಾಯ - ChatGPT (ಪ್ರಮುಖ ಸ್ವತ್ತು): ಬಳಕೆದಾರರು ಯಾವುದನ್ನೂ ಕ್ಲಿಕ್ ಮಾಡದೆಯೇ ಖಾತೆಯನ್ನು ವಶಪಡಿಸಿಕೊಳ್ಳುವುದು.

$6,500

$30,000 × 1.15 ಗುಣಮಟ್ಟದ ಬೋನಸ್ × 1.30 ಆದ್ಯತಾ ಅಭಿಯಾನದ ಬೋನಸ್ × 1.15 31337 ಹಂತದ ನಿಷ್ಠಾ ಬೋನಸ್

$51,577

ಅಸಾಧಾರಣ ಮಟ್ಟದ ಅಪಾಯ - ChatGPT (ಪ್ರಮುಖ ಸ್ವತ್ತು): ಭದ್ರತಾ ಗಡಿಯನ್ನು ಗಂಭೀರವಾಗಿ ಉಲ್ಲಂಘಿಸುವುದು (ಉದಾ., ಯಾವುದೇ ChatGPT ಬಳಕೆದಾರರ ಚಾಟ್ ಸಂದೇಶಗಳನ್ನು ನೋಡಲು ಸಾಧ್ಯವಾಗುವುದು.)

$100,000

$100,000 × 1.15 ಗುಣಮಟ್ಟ × 1.30 ಆದ್ಯತಾ ಅಭಿಯಾನ × 1.15 31337 ನಿಷ್ಠೆ

$171,925

ಎಲ್ಲ ಸಂದರ್ಭಗಳು ಮತ್ತು ಹಿಂದಿನ ಬಹುಮಾನಗಳನ್ನು ಉದಾಹರಣೆಗಾಗಿ ಮಾತ್ರ ನೀಡಲಾಗಿದೆ.

ಹಿಂದಿನ ವರದಿಗಳಿಗೆ ಅನ್ವಯಿಸುವ ಪಾವತಿಗಳು

ನೀವು ಈಗಾಗಲೇ ವರದಿ ಸಲ್ಲಿಸಿದ್ದು, ನಾವು ಇನ್ನೂ ಬಹುಮಾನ ನೀಡದಿದ್ದರೆ, ಹೊಸ ಬಹುಮಾನದ ಶ್ರೇಣಿಗಳನ್ನು ಅನ್ವಯಿಸುತ್ತೇವೆ. ಈ ಪ್ರಕಟಣೆಗೆ ಮುಂಚಿನ 30 ದಿನಗಳಲ್ಲಿ ನಾವು ನೀಡಿದ ಬಹುಮಾನಗಳಿಗೆ ಸಂಬಂಧಿಸಿದಂತೆ, ನೀವು ಪತ್ತೆಹಚ್ಚಿದ ದೋಷಕ್ಕೆ ಹೊಸ ಶ್ರೇಣಿಗಳ ಅಡಿಯಲ್ಲಿ ಹೆಚ್ಚಿನ ಮೊತ್ತ ಸಿಗುವಂತಿದ್ದರೆ, ಆ ವ್ಯತ್ಯಾಸದ ಮೊತ್ತವನ್ನು ನಿಮಗೆ ಪಾವತಿಸುತ್ತೇವೆ (ಮೂಲ ಬಹುಮಾನ + ನಿಷ್ಠಾ ಬಹುಮಾನಗಳು).

ಓಕ್‌ಲ್ಯಾಂಡ್‌ನಲ್ಲಿ ನಮ್ಮನ್ನು ಭೇಟಿಯಾಗಿ

ನವೆಂಬರ್ 20–21 ರಂದು ನಮ್ಮ ಭದ್ರತಾ ತಂಡವು ಓಕ್‌ಲ್ಯಾಂಡ್‌ನ PROMPT2PWN⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಅಲ್ಲಿ ಸಂಶೋಧಕರು ಪರೀಕ್ಷೆಗೆ ಒಳಪಟ್ಟ ಉತ್ಪನ್ನಗಳನ್ನು ಖುದ್ದಾಗಿ ಪರೀಕ್ಷಿಸಬಹುದು. ನೀವು ಅಲ್ಲಿಗೆ ಬರುವುದಾದರೆ, ನೀವು ಯಾವ ಕೆಲಸದಲ್ಲಿ ತೊಡಗಿದ್ದೀರಿ ಮತ್ತು ನಿಮ್ಮೊಂದಿಗೆ ಹೇಗೆ ಸಹಕರಿಸಬಹುದು ಎಂಬುದನ್ನು ತಿಳಿದುಕೊಳ್ಳಲು ನಾವು ಉತ್ಸುಕರಾಗಿದ್ದೇವೆ.

ದೋಷದ ಸುಳಿವನ್ನು ತನಿಖೆ ಮಾಡಿ ನಮಗೆ ವರದಿ ಮಾಡಲು ಸಮಯ ಮೀಸಲಿಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮ್ಮ ಗಮನಕ್ಕೆ ಬಾರದ ಸಂಗತಿಯೊಂದು ನಿಮಗೆ ಕಂಡಾಗ, ನೀವು ಮತ್ತೆ ಸಂಪರ್ಕಿಸಲು ಬಯಸುವ ತಂಡವಾಗಿ OpenAI ಇರಬೇಕೆಂಬುದು ನಮ್ಮ ಆಶಯ.